ಕಲ್ಲು ಹೂ : ಆಲ್ಗೆ (ಪಾಚಿ) ಮತ್ತು ಶಿಲೀಂಧ್ರ (ಫಂಗಸ್) ಎಂಬ ಎರಡು ವಿಭಿನ್ನ ವರ್ಗಗಳಿಗೆ ಸೇರಿದ ಸಸ್ಯಗಳು ಒಂದುಗೂಡಿ ಒಂದು ಪ್ರತ್ಯೇಕ ಪ್ರಭೇದದಂತೆ ತೋರುವ ಒಂದು ಮಿಶ್ರಸಸ್ಯ (ಲೈಕನ್ಸ್‌). ಇವಕ್ಕೆ ಶಿಲಾವಲ್ಕಗಳೆಂಬ ಹೆಸರೂ ಉಂಟು. ಈ ಎರಡು ಭಿನ್ನವರ್ಗದ ಸಸ್ಯಗಳು ನಡೆಸುವ ಸಹಜೀವನವನ್ನು ಸಿಂಬಿಯೋಸಿಸ್ ಅಥವಾ ಕೂಡುಜೀವನ ಎಂದು ಕರೆಯುವರು. ಈ ಮಿಶ್ರಸಸ್ಯವನ್ನು ಸಾಮಾನ್ಯವಾಗಿ ಪಾಚಿ ಅಥವಾ ಹಾವಸೆ (ಮಾಸೆಸ್) ಸಸ್ಯವರ್ಗದೊಳಗೆ ಪರಿಗಣಿಸುವುದಾದರೂ ಇವೆರಡಕ್ಕೂ ಯಾವ ಸಂಬಂಧವೂ ಇಲ್ಲ. ಕಲ್ಲು ಹೂಗಳು ಸರ್ವೇಸಾಮಾನ್ಯವಾಗಿ ಪ್ರಪಂಚದ ಎಲ್ಲ ಕಡೆಯೂ ಬೆಳೆಯುವುವಾದರೂ ಆಲ್ಪೈನ್ ಮತ್ತು ತಂಡ ಪ್ರದೇಶದಲ್ಲಿ ಇವು ಪ್ರಧಾನ ಸಸ್ಯವರ್ಗವೆನಿಸಿವೆ. ಅತಿ ಎತ್ತರದ ಮತ್ತು ಮೇರು ಪ್ರದೇಶಗಳ ಶೈತ್ಯದ ವೈಪರೀತ್ಯವನ್ನು ಇವು ತಡೆಯಬಲ್ಲುವು. ಈ ಸಸ್ಯಗಳಲ್ಲಿ ಸುಮಾರು (೪೦೦) ಜಾತಿಗಳೂ (೧೫,೦೦೦) ಪ್ರಭೇದಗಳೂ ಇವೆ. ಇವುಗಳಲ್ಲಿ ಶಿಲೀಂಧ್ರ ಭಾಗವೇ ಹೆಚ್ಚಾಗಿದ್ದು ಪಾಚಿಯ ಭಾಗ ಅತ್ಯಲ್ಪವೆಂದೇ ಹೇಳಬಹುದು. ಹೀಗೆ ಎರಡು ಭಿನ್ನ ಬಗೆಯ ಸಸ್ಯಗಳ ಮಿಶ್ರಣ ಅಥವಾ ಸಂಯುಕ್ತ ಸಸ್ಯಗಳನ್ನೊಳಗೊಂಡ ಒಂದು ವಿಶಿಷ್ಟ ಗುಂಪಿಗೆ ಮೈಕೊಫೈಕೊಪೈಟ ಎಂಬ ಹೆಸರು ಕೊಡಲಾಗಿದೆ. ಇವು ಬಹು ವ್ಯಾಪಕವಾಗಿ ಸರ್ವತ್ರ ಹರಡಿರುವುದಕ್ಕೆ ಇವುಗಳಲ್ಲಿರುವ ಯಶಸ್ವೀ ಪ್ರಸಾರ ಸಾಧನ ಮುಖ್ಯ ಕಾರಣವೆನಿಸಿದೆ. ಇವು ಅತಿ ಭಿನ್ನ ಸನ್ನಿವೇಶಗಳಲ್ಲಿಯೂ ಊರ್ಜಿತವಾಗಬಲ್ಲವು. ಇವು ಸಾಕಷ್ಟು ತಂಪು ಮತ್ತು ನೆರಳು ಇರುವ ಜಾಗಗಳಲ್ಲಿ ಅಂದರೆ-ಮರದ ಕಾಂಡ, ಶಾಖೆ, ತೊಗಟೆ, ಕಂಬ, ದಿಮ್ಮಿ, ಇತ್ಯಾದಿಗಳ ಮೇಲೂ ಕಲ್ಲುಬಂಡೆಗಳ ಮೇಲೂ ಬೆಳೆಯುತ್ತವೆ. ದಟ್ಟ ಅರಣ್ಯಗಳಲ್ಲಿ ಮರದಿಂದ ಮರಕ್ಕೆ ಶಾಖೆಯಿಂದ ಶಾಖೆಗೆ, ತೋರಣದಂತೆ ಹರಡಿಕೊಳ್ಳುವುದೂ ಉಂಟು. ಆದರೆ ಸಮುದ್ರದಲ್ಲಿ ಇಲ್ಲವೆ ಸಿಹಿನೀರಿನಲ್ಲಿ ವಾಸಿಸುವುದು ವಿರಳ. 

ಇವನ್ನು ಮೊಟ್ಟಮೊದಲಿಗೆ ತಲ್ಸೇನ್ ಎಂಬುವನು ಶೋಧಿಸಿದನು. ಕೆಲವು ವರ್ಷಗಳ ಅನಂತರ ಅವುಗಳಲ್ಲಿರುವ ಎರಡು ಬಗೆಯ ಸಸ್ಯಗಳ ವಿವರಗಳನ್ನು ಡಿ ಬಾರಿ ಎಂಬಾತ ಗುರುತಿಸಿದ. ವಿವಿಧ ಬಗೆಯ ಪಾಚಿ ಮತ್ತು ಶಿಲೀಂಧ್ರಗಳ ಸಂಯುಕ್ತದಿಂದ ಒಂದೊಂದು ನಿರ್ದಿಷ್ಟ ಜಾತಿ ಅಥವಾ ಪ್ರಭೇದದ ಶಿಲಾವಲ್ಕ ರೂಪುಗೊಳ್ಳುತ್ತದೆ. ಇವು ಸಾಮಾನ್ಯವಾಗಿ ಬೂದು, ಹಸಿರು ಅಥವಾ ಇತರ ಬಣ್ಣಗಳ ಬಿಲ್ಲೆ ಅಥವಾ ಪಟ್ಟಿಯಂಥ ಸಸ್ಯಗಳಾಗಿರುತ್ತವೆ. ಒಂದರಿಂದ ಹಲವಾರು ಸೆಂಮೀ.ಗಳವರೆಗೆ ಹರಡಿಕೊಂಡಿರುತ್ತವೆ. ಕೆಲವು ಕಲ್ಲುಹೂಗಳು ಬಿಳಿ, ಹಳದಿ, ಕೆಂಪು, ಕಿತ್ತಳೆ ಅಥವಾ ಕಪ್ಪು ಬಣ್ಣವುಳ್ಳದ್ದಾಗಿ ಇರುವುದುಂಟು. ಅನೇಕ ಕಲ್ಲುಹೂಗಳು ಅತ್ಯಂತ ವೈಪರೀತ್ಯದ ಉಷ್ಣತೆ ಮತ್ತು ಶೈತ್ಯ, ಇಲ್ಲವೆ ಶುಷ್ಕ ಮತ್ತು ಆದರ್ರ್‌ ಹವೆ ಇರುವ ಸನ್ನಿವೇಶಗಳಲ್ಲಿಯೂ ಬೆಳೆಯಬಲ್ಲುವು. ಮೇಲಾಗಿ ಅತಿ ದೀರ್ಘಕಾಲದ ಶುಷ್ಕ ಪರಿಸ್ಥಿತಿಯನ್ನೂ ತಾಳಿಕೊಳ್ಳಬಲ್ಲುವು. ಪರಿಸರದಿಂದ ನೀರು ಮತ್ತು ಖನಿಜಾಂಶಗಳನ್ನು ಶಿಲೀಂಧ್ರ ಹೀರಿಕೊಂಡು ಪಾಚಿಗಳಿಗೆ ಒದಗಿಸುತ್ತದೆ. ಪಾಚಿಗಳಾದರೋ ತಮ್ಮ ಸರದಿಯಲ್ಲಿ ತಮ್ಮ ಹಸಿರು ವರ್ಣದ್ರವ್ಯದಿಂದ (ಕ್ಲೋರೋಫಿಲ್) ಆಹಾರತಯಾರಿಸಿ ಶಿಲೀಂಧ್ರಗಳಿಗೆ ಒದಗಿಸುತ್ತವೆ. ಈ ಮೂಲಕ ಶಿಲಾವಲ್ಕಗಳಲ್ಲಿ ಕೂಡುಜೀವನದ ಒಂದು ಆದರ್ಶ ನಿದರ್ಶನವನ್ನು ನಾವು ಕಾಣಬಹುದು. ಅದರಲ್ಲಿರುವ ಪಾಚಿ ಮತ್ತು ಶಿಲೀಂಧ್ರಗಳನ್ನು ಬೇರ್ಪಡಿಸಿದ್ದಾದರೆ ಅವು ಅನಿಶ್ಚಿತ ಅಥವಾ ಅತ್ಯಂತ ಕಷ್ಟದಿಂದ ಜೀವನ ನಿರ್ವಹಿಸಬೇಕಾಗುತ್ತದೆ. ಅದರಲ್ಲಿಯೂ ಈ ಮಾತು ಶಿಲೀಂಧ್ರಕ್ಕೆ ಹೆಚ್ಚು ಅನ್ವಯಿಸುತ್ತದೆ.
ಭಾರತದಲ್ಲಿ ಕಲ್ಲುಹೂಗಳು ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಅದರಲ್ಲೂ ಪೂರ್ವಭಾಗಗಳಲ್ಲಿ ಹೆಚ್ಚಾಗಿ ಬೆಳೆಯುವುದು ಕಂಡುಬರುತ್ತದೆ.

ವರ್ಗೀಕರಣ
ಕಲ್ಲು ಹೂಗಳನ್ನು, ಅವು ಬೆಳೆಯುವ ಪರಿಸರಗಳಿಗೆ ಅನುಗುಣವಾಗಿ, ಹೀಗೆ ವರ್ಗೀಕರಿಸಲಾಗುತ್ತದೆ. ೧ ಸ್ಯಾಕ್ಸಿಕೋಲ್ಸ್‌: ಇವು ಕಲ್ಲುಬಂಡೆಗಳ ಮೇಲೆಯೇ ಹೆಚ್ಚಾಗಿ ಬೆಳೆಯುವ ಕಲ್ಲುಹೂಗಳು. ಅವುಗಳಿಗೆ, ಲಿಥೊಫೈಟ್ಸ್‌ ಎಂದೂ ಹೇಳುವುದುಂಟು. ಅವು ಭೂಸವಕಳಿಗೂ (ಸಾಯ್ಲ್‌ ಎರೋಷನ್) ಕಾರಣವಾಗುವುದುಂಟು. ೨ ಕಾರ್ಟಿಕೋಲ್ಸ್‌: ಇವು ಅಪ್ಪು ಗಿಡಗಳಾಗಿ (ಎಪಿಫೈಟ್ಸ್‌) ವಿಶೇಷವಾಗಿ ಮರದ ಕಾಂಡ, ಶಾಖೆ ಮತ್ತು ತೊಗಟೆಯ ಮೇಲೆ ಬೆಳೆಯುವ ಕಲ್ಲು ಹೂಗಳು. ಶಿಲಾವಲ್ಕಗಳ ಆಕಾರ, ರಚನೆಗಳಿಗೆ ಅನುಗುಣವಾಗಿಯೂ ಅವನ್ನು ಮೂರು ಪ್ರಮುಖ ಗುಂಪುಗಳಾಗಿ ಇನ್ನೊಂದು ರೀತಿ ವರ್ಗೀಕರಿಸುವುದುಂಟು. ೧ ಬಿಲ್ಲೆಯಾಕಾರದ ಕಲ್ಲು ಹೂಗಳು (ಕ್ರಸ್ಟೋಪ್ ಲೈಕೆನ್ಸ್‌): ಇವು ಬಿರುಸು ಕಣಗಳಿಂದಾಗ ಬಿಲ್ಲೆಗಳಂತಿದ್ದು, ಕಲ್ಲುಬಂಡೆಗಳು, ಮರದ ಕಾಂಡ ಮತ್ತು ಶಾಖೆಗಳು, ಕೆಲವು ವಿಶಿಷ್ಟ ಬಗೆಯ ಭೂಸನ್ನಿವೇಶಗಳು ಇತ್ಯಾದಿಗಳಿಗೆ ಅತ್ಯಂತ ನಿಕಟವಾಗಿಯೂ ಸುಲಭವಾಗಿ ಬೇರ್ಪಡಿಸಲಾಗದಂತೆಯೂ ಅಂಟಿಕೊಂಡಿರುತ್ತವೆ. ಅವುಗಳಲ್ಲಿ ಮೇಲ್ಭಾಗ ಮತ್ತು ಕೆಳಭಾಗವೆಂಬ ವ್ಯತ್ಯಾಸ ಅಷ್ಟಾಗಿ ಇರುವುದಿಲ್ಲ. ಉದಾ: ಗ್ರಾಫಿಸ್, ಲಿಕಾನೋರ ಇತ್ಯಾದಿ. ೨ ಎಲೆಯಾಕಾರದ ಕಲ್ಲುಹೂಗಳು (ಫೋಲಿಯೋಸ್ ಲೈಕೆನ್ಸ್‌): ಇವು ನಿರ್ದಿಷ್ಟ ಆಕಾರ, ಹಾಗೂ ಚಪ್ಪಟೆಯಾದ ಎಲೆಗಳಂತಿರುವ ಸಸ್ಯಗಳಾಗಿದ್ದು, ಅಂಚು ಸ್ವಲ್ಪ ಮೇಲ್ಮುಖವಾಗಿಯೂ ವಕ್ರವಕ್ರವಾಗಿಯೂ ಇರುವುದುಂಟು. ಅವು ಗೋಡೆ, ಮರದ ತೊಗಟೆ ಮತ್ತು ವಿಶಿಷ್ಟ ಭೂಸನ್ನಿವೇಶಗಳಿಗೆ ಅಂಟಿಕೊಂಡು ಬೆಳೆಯುತ್ತವೆ. ಅವುಗಳ ಕೆಳಭಾಗದಲ್ಲಿ ರೈಸಿನ್ಸ್‌ ಎಂದು ಕರೆಯುವ ಅತ್ಯಂತ ಸೂಕ್ಷ್ಮವಾದ ಮತ್ತು ಕೆಳಭಾಗಗಳು ನಿರ್ದಿಷ್ಟವಾಗಿರುವುದು ಕಂಡುಬರುತ್ತದೆ. ಉದಾ: ಪಾರ್ಮೀಲಿಯ, ಫಿಸ್ಸಿಯ, ಗೈರೊಫೊರ, ಪೆಲ್ಟಿಜೆರ ಇತ್ಯಾದಿ. ೩ ಫಲಭರಿತ ಕಲ್ಲುಹೂಗಳು (ಫ್ರೂಟಿಕೋಸ್ ಲೈಕೆನ್ಸ್‌): ಇವು ಕಂಟಿ ಅಥವಾ ಪೊದರಿನಂತೆ ಅನೇಕ ಶಾಖೋಪಶಾಖೆಗಳಾಗಿ ಕವಲೊಡೆದು ಬೆಳೆಯುವ ಕಲ್ಲುಹೂಗಳು. ಇವು ಯಾವುದಾದರೂ ಒಂದು ವಸ್ತುವಿಗೆ-ಮರದ ಶಾಖೆ, ತೊಗಟೆ ಇತ್ಯಾದಿ-ನೀಳ ಹಾಗೂ ತೆಳುವಾದ ಕಿರುಶಾಖೆಯೊಂದರ ಸಹಾಯದಿಂದ ಅಂಟಿಕೊಂಡಿರುತ್ತವೆ. ತುದಿಯ ಶಾಖೆಗಳು ಚಪ್ಪಟೆಯಾದ ಉದ್ದನೆಯ ಪಟ್ಟಿಯಂತಿರಬಹುದು. ಇಲ್ಲವೆ ದುಂಡಾದ ಸೂಕ್ಷ್ಮ ಎಳೆಯಬಹುದು. ಈ ಬಗೆಯ ಕಲ್ಲುಹೂಗಳು ನೇರ ಹಾಗೂ ಎತ್ತರವಾಗಿ ಬೆಳೆಯಬಹುದು. ಉದಾ: ಕ್ಲಾಡೊನಿಯ. ಕೆಲವು ಕಲ್ಲುಹೂಗಳು ಮರದ ಶಾಖೆಗಳಿಂದ ಕೆಳಮುಖವಾಗಿ ಜೋತುಬೀಳಬಹುದು. ಅಂಥವು ನೀಳವಾದ ಗಡ್ಡದಂತೆ ಕಾಣಬಹುದು. ಉದಾ: ಉಸ್ನಿಯ, ರಮಾಲಿನ, ಇತ್ಯಾದಿ. ಕಲ್ಲುಹೂಗಳಲ್ಲಿರುವ ಶಿಲೀಂಧ್ರ ಸೇರಿರುವ ಗುಂಪುಗಳಿಗೆ ಅನುಗುಣವಾಗಿ ಇವನ್ನು ಇನ್ನೊಂದು ರೀತಿಯಲ್ಲಿಯೂ ವರ್ಗೀಕರಿಸುವುದುಂಟು.

 ೧ ಆಸ್ಕೊಲೈಕೆನ್ಸ್‌ : ಇಲ್ಲಿ ಶಿಲೀಂಧ್ರ ಆಸ್ಕೊಮೈಸಿಟ್ ಎಂಬ ಗುಂಪಿಗೆ ಸೇರಿದುದಾಗಿರುತ್ತದೆ. ಉದಾ: ಪಾರ್ಮೀಲಿಯ, ಫಿಸ್ಸಿಯ, ಉಸ್ನಿಯ, ಕ್ಲಾಡೋನಿಯ, ಗ್ರಾಫಿಸ್, ವೆರುಕೇರಿಯ, ಇತ್ಯಾದಿ. 
 ೨ ಬೆಸಿಡಿಯೊಲೈಕೆನ್ಸ್‌: ಇಲ್ಲಿ ಶಿಲೀಂಧ್ರ ಬೆಸಿಡಿಯೊಮೈಸೀಟ್ ಎಂಬ ಗುಂಪಿಗೆ ಸೇರಿದುದಾಗಿರುತ್ತದೆ. ಉದಾ: ಕೋರ, ರೈಫಿಡೋನಿಮ ಇತ್ಯಾದಿ. ಈ ಆಸ್ಕೊಲೈಕೆನ್ಸ್‌ ಎಂಬ ಕಲ್ಲುಹೂಗಳನ್ನು ಅವು ಭರಿಸುವ ಪ್ರತ್ಯುತ್ಪತ್ತಿ ಕೋಶ ಅಥವಾ ಫಲೋತ್ಪಾದನೆಗೆ ಅನುಗುಣವಾಗಿ ಮತ್ತೆ ವಿಭಾಗಿಸಲಾಗುತ್ತದೆ. ಆ ಉಪವಿಭಾಗಗಳು-(೧) ಪೈರಿನೊಕಾರ್ಪಿ (ಪೆರಿತೀಸಿಯಗಳನ್ನು ಒಳಗೊಂಡಂಥವು); (೨) ಜಿಮ್ನೊಕಾರ್ಪಿ (ಅಪೊತೀಸಿಯಗಳನ್ನು ಒಳಗೊಂಡಂಥವು).

ಪೋಷಣೆ (ನ್ಯೂಟ್ರಿಷನ್)
ಕಲ್ಲುಹೂಗಳ ಬೆಳೆವಣಿಗೆ ಬಲುನಿಧಾನ. ಅದರಿಂದ ಇವುಗಳ ಆವಶ್ಯಕತೆಗಳೂ ಅತ್ಯಲ್ಪ. ಸಾಮಾನ್ಯವಾಗಿ ಇವು ಸುತ್ತಲಿನ ನೀರು ಮತ್ತು ಖನಿಜಾಂಶಗಳನ್ನು ಬೇರಿನಂತಿರುವ ರೈಸಿನ್ಸ್‌ ಎಂಬ ಅತ್ಯಂತ ಸೂಕ್ಷ್ಮ ಎಳೆಗಳ ಮೂಲಕ ಹೀರಿಕೊಳ್ಳುತ್ತವೆ. ಕೊಳೆತಿನಿ ಅಥವಾ ಮೃತೋಪಜೀವಿಗಳಾದ ಶಿಲೀಂಧ್ರಗಳು ಸಾವಯವ ರೂಪದ ಆಹಾರವನ್ನು ಹೀರಿಕೊಳ್ಳುತ್ತವೆ. ಜೊತೆಗೆ ಸ್ವತಂತ್ರವಾಗಿ ಆಹಾರ ತಯಾರಿಸಿಕೊಳ್ಳಬಲ್ಲ ಪಾಚಿಗಳು ಕೆಲಮಟ್ಟಿಗೆ ಶಿಲೀಂಧ್ರಗಳಿಗೆ ಸಿದ್ಧ ಆಹಾರವನ್ನು ಒದಗಿಸುತ್ತವೆ. ಕಲ್ಲುಹೂಗಳಲ್ಲಿರುವ ಶಿಲೀಂಧ್ರ ಕೆಲವು ಬಗೆಯ ಕಿಣ್ವಗಳನ್ನು ಉತ್ಪಾದಿಸುತ್ತದೆ. ಇದರಿಂದ ಪಾಚಿ ತನ್ನ ಆಹಾರವನ್ನು ಸುಲಭವಾಗಿ ಶಿಲೀಂಧ್ರದ ಕಡೆಗೆ ಹರಿಯಿಸಲು (ಸಾಗಿಹಾಕಲು) ಅನುಕೂಲವಾಗುತ್ತದೆ. ಪ್ರಮುಖ ಪ್ರತ್ಯುತ್ಪತ್ತಿಕಾರಕಗಳೆನಿಸಿದ ಅಪೋತೀಸಿಯ ಇಲ್ಲವೆ ಪೆರಿತೀಸಿಯ ಎಂಬುವನ್ನು ಶಿಲೀಂಧ್ರವೇ ಉತ್ಪಾದಿಸುತ್ತದೆ. ಇದರಿಂದ ಪಾಚಿ ಮತ್ತು ಶಿಲೀಂಧ್ರಗಳ ನಡುವೆ ಪರಸ್ಪರಾವಲಂಬನಕ್ಕಿಂತ ಶಿಲೀಂಧ್ರವೇ ಪಾಚಿಯ ಮೇಲೆ ಕೆಲಮಟ್ಟಿಗೆ ಜೀವಿಯಾಗಿ ಬಾಳುವುದೆಂದು ಕೆಲವರು ಭಾವಿಸುವುದುಂಟು.
ವಂಶಾಭಿವೃದ್ಧಿ ಕ್ರಮ
ಶಿಲಾವಲ್ಕಗಳಲ್ಲಿ ವಂಶಾಭಿವೃದ್ಧಿ ಅಲಿಂಗರೀತಿಯಲ್ಲೂ (ವೆಜೆಟೆಟೀವ್ ಪ್ರೊಪೊಗೇಷನ್) ನಿರ್ಲಿಂಗ ರೀತಿಯಲ್ಲೂ (ಏಸೆಕ್ಷುಯಲ್) ಲಿಂಗರೀತಿಯಲ್ಲೂ (ಸೆಕ್ಷುಯಲ್) ನಡೆಯುತ್ತದೆ.

ಅಲಿಂಗ ರೀತಿಯ ವಂಶಾಭಿವೃದ್ಧಿ
(ಎ) ಸೊರೀಡಿಯ : ಇವು ಅತ್ಯಂತ ಸೂಕ್ಷ್ಮಗಾತ್ರದ ಹಾಗೂ ಗೋಳಾಕಾರದ, ಬೂದು ಬಣ್ಣದ ದೂಳಿನ ಕಣಗಳಂತೆ ಇರುತ್ತವೆ. ಆ ಕಣಗಳ ಪಾಚಿ ಮತ್ತು ಶಿಲೀಂಧ್ರಗಳ ತುಣುಕುಗಳು ಇರುತ್ತವೆ. ಅವು ಸಸ್ಯದ ಮೇಲಿಂದ ಹುಡಿಹುಡಿಯಾಗಿ ಎದ್ದು, ಗಾಳಿಯಲ್ಲಿ ತೂರಿ, ಪ್ರಸಾರವಾಗಿ ಮುಂದೆ ಹೊಸ ಸಸ್ಯಗಳಾಗಿ ರೂಪುಗೊಳ್ಳುತ್ತವೆ. 
(ಬಿ) ಇಸಿಡಿಯ : ಇವು ಸಸ್ಯದ ಮೇಲೆ ಅತಿ ಸೂಕ್ಷ್ಮ ಗಾತ್ರದ ಉಬ್ಬುಗಳಂತೆ ಬೆಳೆದು, ಕ್ರಮೇಣ ಬೇರ್ಪಟ್ಟು, ಹೊಸ ಸಸ್ಯಗಳಾಗಿ ಬೆಳೆಯಬಲ್ಲವು. (ಸಿ) ಸಿಫೆಲೋಡಿಯ : ಇವು ಸಸ್ಯದ ಮೇಲ್ಭಾಗದಲ್ಲಿ ಅಲ್ಲಲ್ಲೇ ಕಪ್ಪು ಬಣ್ಣದ ಹಾಗೂ ದೊಡ್ಡ ಗಾತ್ರದ ಉಬ್ಬುಗಳಂತೆ ಬೆಳೆದು ಕ್ರಮೇಣ ಬೇರ್ಪಟ್ಟು ಹೊಸ ಸಸ್ಯಗಳಾಗುತ್ತವೆ. (ಡಿ) ಸೈಫೆಲ್ಲೇ: ಇವು ಸಸ್ಯದ ಕೆಳಭಾಗದಲ್ಲಿ ಗೋಳಾಕಾರದ ತಗ್ಗುಗಳಂತಿರುತ್ತವೆ. ಪ್ರಾಯಶಃ ಇವು ಅನಿಲ ವಿನಿಮಯ ಕ್ರಿಯೆಗೆ ಪೋಷಕವಾಗುವುವು.

ನಿರ್ಲಿಂಗರೀತಿ ವಂಶಾಭಿವೃದ್ಧಿ
ಇಲ್ಲಿ ಅಸಂಖ್ಯ ಕಪ್ಪು ಬಣ್ಣದ ಸೂಕ್ಷ್ಮ ಬೀಜಕಣಗಳು (ಸ್ಪೋರುಗಳು) ಫ್ಲಾಸ್ಕಿನ ಆಕಾರದ ಪಿಕ್ನಿಡಿಯ ಎಂಬ ಕೋಶಗಳಲ್ಲಿ ಉತ್ಪಾದನೆಗೊಳ್ಳುತ್ತದೆ. ಈ ಕಣಗಳು ಶಿಲೀಂಧ್ರಗಳ ಪ್ರತಿನಿಧಿರೂಪಗಳೇ ಆಗಿದ್ದು, ಮುಂದೆ ಹೊರ ಬಿದ್ದಾಗ ಉದ್ದುದ್ದನೆಯ ಕವಲೊಡೆದ ಎಳೆಗಳಂತೆ ಬೆಳೆಯಲಾರಂಭಿಸುತ್ತವೆ. ಈ ಎಳೆಗಳು ಪಾಚಿಗಳ ಸಂಪರ್ಕ ಹೊಂದಿದಾಗಲೇ ಅವೆರಡೂ ಕೂಡಿಕೊಂಡು ಶಿಲಾವಲ್ಕವಾಗಿ ರೂಪುಗೊಳ್ಳುವುದು.

ಲೈಂಗಿಕ ರೀತಿ
ಇವನ್ನು ಆಸ್ಕೊಲೈಕೆನ್ಸ್‌ ಎಂಬುದರಲ್ಲಿ ವಿಶೇಷವಾಗಿ ನೋಡಬಹುದು. ಇಲ್ಲಿ ಶಿಲೀಂಧ್ರವೊಂದೇ ಲೈಂಗಿಕ ಪುನರುತ್ಪತ್ತಿಯಲ್ಲಿ ಭಾಗವಹಿಸುವುದು. ಕಡೆಗೆ ಪ್ರತ್ಯುತ್ಪತ್ತಿಕಾರಕಗಳು ಅಪೊತೀಸಿಯ ಇಲ್ಲವೆ ಪೆರಿತೀಸಿಯಗಳಾಗಿ ರೂಪಗೊಳ್ಳುತ್ತವೆ.

ಕಲ್ಲು ಹೂಗಳ ಉಪಯುಕ್ತತೆ
ಆರ್ಥಿಕ ದೃಷ್ಟಿಯಿಂದ ಕಲ್ಲು ಹೂಗಳಿಗೆ ವಿವಿಧ ರೀತಿಯಲ್ಲಿ ಪ್ರಾಮುಖ್ಯವಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸಿದೆ.
ಮಣ್ಣಿನ ಕಣಗಳ ನಿರ್ಮಾಣ (ಸಾಯ್ಲ್‌ ಬಿಲ್ಡರ್)
ಕಲ್ಲುಹೂಗಳು ಕಲ್ಲುಬಂಡೆಗಳ ಮೇಲೆ ಬೆಳೆಯಲಾರಂಭಿಸಿದ ಪ್ರಪ್ರಥಮ ಸಸ್ಯಗಳು. ಇವು ಕ್ರಮೇಣ ಕಲ್ಲುಬಂಡೆಗಳನ್ನು ಛಿದ್ರಗೊಳಿಸಿ, ಕಾಲಕ್ರಮದಲ್ಲಿ ಅಲ್ಲಿ ಇತರ ಸೂಕ್ಷ್ಮ ಸಸ್ಯಗಳು ಬೆಳೆಯಲು ಅನುಕೂಲವಾಗುವಂಥ ಮಣ್ಣಿನ ಕಣಗಳನ್ನು ರೂಪಿಸುತ್ತವೆ. ಅದರಿಂದ ಕಲ್ಲುಹೂಗಳನ್ನು ಮಣ್ಣಿನ ನಿರ್ಮಾಪಕರೆಂತಲೂ ಕರೆಯುವುದುಂಟು. ಮುಂದೆ ಕಲ್ಲುಹೂಗಳು ನಶಿಸಿ ಕೊಳೆತ ಮೇಲೆ, ಅಲ್ಲಿ ಸ್ವಲ್ಪ ಮಣ್ಣು ಮತ್ತು ಗೊಬ್ಬರ ಸೇರಿ ಆ ಜಾಗವನ್ನು ಹದಗೊಳಿಸಿದಂತಾಗುತ್ತದೆ. ಅನಂತರ ಅಲ್ಲಿ ಶೈವಲಗಳು, ಜರೀಗಿಡಗಳು (ಫೆನ್ರ್ಸ್‌) ಇತ್ಯಾದಿ ಸಸ್ಯಗಳು ಹಂತಹಂತವಾಗಿ ಬೆಳೆಯಲು ಅನುಕೂಲವಾಗುತ್ತದೆ.
ಆಹಾರರೂಪದ ಮಹತ್ತ್ವ
ಕಲ್ಲು ಹೂವಿನಲ್ಲಿರುವ ಲೈಕೆನಿನ್ ಎಂಬ ಘಟಕ ಪಿಷ್ಟರೂಪದ ಸ್ಟಾರ್ಚ್ನಂತೆಯೇ ಇರುತ್ತದೆ. ಆದರೆ ಕಲ್ಲು ಹೂವಿನಲ್ಲಿ ನಿಜವಾದ ಅಥವಾ ಗಣನೀಯವಾದ ಸ್ಟಾರ್ಚ್ ಅಥವಾ ಸೆಲ್ಯುಲೋಸ್ ಇರುವುದಿಲ್ಲ. ಹಲವಾರು ಬಗೆಯ ಕಲ್ಲು ಹೂಗಳು ಕೆಲವು ಬಗೆಯ ಕೀಟ ಮತ್ತು ಅವುಗಳ ಮರಿಗಳಿಗೆ ಉತ್ತಮ ಆಹಾರ. ಧ್ರುವ ಪ್ರದೇಶಗಳಲ್ಲಿ ಬೆಳೆಯುವ ಕ್ಲಾಡೋನಿಯ ರಾಂಜಿಫೆರದಂಥ ಕೆಲವು ಕಲ್ಲುಹೂಗಳನ್ನು ಅಲ್ಲಿ ವಾಸಿಸುವ ಹಿಮಸಾರಂಗಗಳು ಮುಖ್ಯ ಆಹಾರವಾಗಿ ಬಳಸಿಕೊಳ್ಳುತ್ತವೆ. ಅದರಿಂದ ಇಂಥ ಕಲ್ಲುಹೂಗಳಿಗೆ ಹಿಮಸಾರಂಗದ ಹುಲ್ಲು ಎಂದು ಹೇಳುವುದುಂಟು. ಐಸ್ಲೆಂಡ್ ಪ್ರದೇಶದಲ್ಲಿ ವಾಸಿಸುವ ಜನರು ಸಿಟ್ರೇರಿಯ ಐಸ್ಲಾಂಡಿಕ ಎಂಬ ಕಲ್ಲುಹೂವನ್ನು ಆಹಾರವಾಗಿ ಬಳಸುತ್ತಾರೆ. ಅದೇ ರೀತಿ ಅಂಬಿಲೆಕೇರಿಯ, ಲೆಕಾನೋರ ಇತ್ಯಾದಿಗಳು ಆಹಾರ ರೂಪದಲ್ಲಿ ಬಳಸಲ್ಪಡುತ್ತವೆ. ಜಪಾನಿನಲ್ಲಿ ಎಂಡೊಕಾರ್ಪಾನ್ ಎಂಬ ಕಲ್ಲು ಹೂವನ್ನು ತರಕಾರಿಗಳಂತೆಯೇ ಸೇವಿಸುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ ಪಾರ್ಮೀಲಿಯ ಎಂಬ ಕಲ್ಲು ಹೂವನ್ನು ಮಸಾಲೆ ವಸ್ತುಗಳ ರೂಪದಲ್ಲಿ ವಿಶೇಷವಾಗಿ ಬಳಸುವರು.
ವೈದ್ಯಕೀಯ ಮಹತ್ತ್ವ
ಹಲವಾರು ಬಗೆಯ ಕಲ್ಲು ಹೂಗಳನ್ನು ಕೆಲವು ಶಿಷ್ಟ ರೋಗಗಳಿಗೆ ಪ್ರಾಚೀನ ಕಾಲದಿಂದಲೂ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಇವುಗಳಲ್ಲಿ ಮುಖ್ಯವಾಗಿ ಲೈಕೆಸಿನ್ ಎಂಬ ರಾಸಾಯನಿಕ ಘಟಕಗಳಿರುತ್ತದೆ. ಜೊತೆಗೆ ಕೆಲವು ಕಹಿ ವಸ್ತುಗಳ ಘಟಕಗಳೂ ಇರುತ್ತವೆ. ಪೆಲ್ಟಿಜೆರಕ್ಯಾನೈನ ಎಂಬುದನ್ನು ಹುಚ್ಚುನಾಯಿರೋಗಕ್ಕೂ ಲೊಬೇರಿಯ ಪಲ್ಮನೇರಿಯ ಎಂಬುದನ್ನು ಶ್ವಾಸಕೋಶ ಸಂಬಂಧದ ರೋಗಗಳಿಗೂ ಕ್ಲಾಡೋನಿಯ ಮತ್ತು ಸಿಟ್ರೇರಿಯ ಎಂಬುವನ್ನು ಕೆಲವು ಬಗೆಯ ಜ್ವರಗಳಿಗೂ ಎವರ್ನಿಯ ಮತ್ತು ಪಾರ್ಮೀಲಿಯ ಎಂಬುವನ್ನು ಮಲರೋಗಕ್ಕೂ ರಕ್ತಸ್ರಾವಕ್ಕೂ ಕ್ಲೆಡೋಯ ಎಂಬುದನ್ನು ನಾಯಿಕೆಮ್ಮಿಗೂ ಬಳಸಲಾಗುತ್ತದೆ. ಕಾಮಾಲೆ, ಅತಿಸಾರ, ಜ್ವರ, ಧನುರ್ವಾತ, ಚರ್ಮರೋಗ ಇತ್ಯಾದಿಗಳಿಗೂ ಇವನ್ನು ಔಷಧರೂಪದಲ್ಲಿ ಬಳಸುವುದುಂಟು.
ಕಲ್ಲು ಹೂವಿನಲ್ಲಿರುವ ಘಟಕಗಳನ್ನು ಪ್ರಯೋಗ ಮಂದಿರಗಳಲ್ಲಿ ಬ್ಯಾಕ್ಟೀರಿಯಗಳ ಬೆಳೆವಣಿಗೆಗೆ ಬಳಸುವುದುಂಟು. ಲಿಟೇರಿಯ ಎಂಬುದನ್ನು ವಿಶೇಷ ಸನ್ನಿವೇಶಗಳಲ್ಲಿ ವಿಷಯುಕ್ತ ಮೂಲಿಕೆಯಾಗಿ ಬಳಸಲಾಗುತ್ತದೆ. ಉಸ್ನಿಯ ಎಂಬ ಕಲ್ಲುಹೂವಿನಲ್ಲಿರುವ ಉಸ್ನಿಕ್ ಆಮ್ಲಗಳಿಗೆ ಬ್ಯಾಕ್ಟೀರಿಯಗಳನ್ನು ನಿರೋಧಿಸುವ ಶಕ್ತಿ ಇರುತ್ತದೆ. ಅದು ಪಾಚಿ ಮೂಲದಿಂದ ಬಂದುದೋ ಶಿಲೀಂಧ್ರದಿಂದ ಬಂದುದೋ ಗೊತ್ತಾಗಿಲ್ಲ. ಉಸ್ನಿಕ್ ಆಮ್ಲ ಮತ್ತು ಸ್ಟ್ರೆಪ್ಟೊಮೈಸಿನ್ ಇವೆರಡೂ ಗಿನಿಹಂದಿಗಳ ಕ್ಷಯರೋಗಕ್ಕೆ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಒಂದೊಂದನ್ನೇ ಪ್ರತ್ಯೇಕವಾಗಿ ಬಳಸಿದರೆ ಮಾತ್ರ ಪ್ರಯೋಜನವಿಲ್ಲ.
ಸುಗಂಧ ದ್ರವ್ಯಗಳಲ್ಲಿ ಬಳಕೆ
ಲೊಬೇರಿಯ ಪಲ್ಮನೇರಿಯ ಮುಂತಾದ ಕೆಲವು ಕಲ್ಲು ಹೂಗಳನ್ನು ಕೆಲವುಬಗೆಯ ಸುಗಂಧದ್ರವ್ಯಗಳ ತಯಾರಿಕೆಗೂ ಸೈಬೀರಿಯದಲ್ಲಿ ಕೆಲವು ಕಡೆ ಮದ್ಯಸಾರವನ್ನು ತಯಾರಿಸುವುದಕ್ಕೂ ಬಳಸುವುದುಂಟು. ಎವೆರಿನ ಎಂಬುದರಿಂದ ಫ್ರೆಂಚರು ಶ್ರೇಷ್ಠ ಸುಗಂಧ ದ್ರವ್ಯಗಳನ್ನು ತಯಾರಿಸುತ್ತಾರೆ. ಉಸ್ನಿಯ ಎಂಬುದನ್ನು ಸೌಂದರ್ಯವರ್ಧಕ ವಸ್ತುಗಳ ನಿರ್ಮಾಣಕ್ಕೆ ಬಳಸಿಕೊಳ್ಳುವುದುಂಟು. ಫ್ರಾನ್ಸಿನಲ್ಲಿ ಕೆಲವು ಕಲ್ಲುಹೂಗಳಿಂದ ಸುಗಂಧ ತೈಲಗಳನ್ನು ಉತ್ಪಾದಿಸಿ ಸಾಬೂನಿನ ತಯಾರಿಕೆಗೆ ಬಳಸುತ್ತಾರೆ.
ಖನಿಜಾಂಶಗಳ ಉಪಯುಕ್ತತೆ
ಲೆಕಾನೋರ ಎಸ್ಕ್ಯುಲೆಂಟ ಎಂಬ ಕಲ್ಲು ಹೂ ಸುಣ್ಣಕಲ್ಲಿರುವ ಶುಷ್ಕ ಭೂಮಿಗಳಲ್ಲಿ ಬೆಳೆಯುತ್ತದೆ. ಅದರಿಂದ ಇವು ಹೆಚ್ಚು ಪ್ರಮಾಣದ ಕ್ಯಾಲ್ಸಿಯಂ ಆಕ್ಸಲೇಟುಗಳನ್ನು ಉತ್ಪಾದಿಸುತ್ತವೆ.
ಇತರ ಉಪಯೋಗಗಳು
ರೋಸೆಲ್ಲ ಮತ್ತು ಲೆಕಾನೋರ ಎಂಬ ಕಲ್ಲು ಹೂಗಳಿಂದ ಉಣ್ಣೆ ಮತ್ತು ಇತರ ಬಟ್ಟೆಗಳಿಗೆ ರಂಗು (ಬಣ್ಣ) ಹಾಕಲು ಕೆಲವು ವಿಶಿಷ್ಟ ಬಣ್ಣಗಳು ದೊರೆಯುತ್ತವೆ. ರೋಸೆಲ್ಲ ಎಂಬುದನ್ನು ಸೂಕ್ಷ್ಮದರ್ಶಕದ ಕೆಳಗೆ ಪರಿಶೀಲಿಸಬೇಕಾಗುವ ಸೂಕ್ಷ್ಮವಸ್ತುಗಳನ್ನು ರಂಗುಗೊಳಿಸಲು ಬಳಸುವ ವರ್ಣವಸ್ತುವನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಅದರಲ್ಲಿ ಅರ್ಕಿಲ್ ಎಂಬ ನೀಲಿವರ್ಣದ ರಂಗನ್ನು ಒದಗಿಸುವ ಘಟಕವಿರುತ್ತದೆ. ಇದೇ ಜೀವಕೋಶಗಳ ಪರಿಶೀಲನೆಯಲ್ಲಿ ಬಳಸುವ ಬಣ್ಣ. ರೋಸೆಲ್ಲ ಎಂಬುದರಿಂದ ಲಿಟ್ಮಸ್ ಎಂಬ ಬಣ್ಣವೂ ದೊರೆಯುತ್ತದೆ. ಇದರಿಂದ ಲಿಟ್ಮಸ್ ಹಾಳೆಗಳನ್ನು ತಯಾರಿಸಿ ರಾಸಾಯನಿಕ ಪರಿಶೀಲನೆಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ.

ಉಸ್ನಿಯ ಶೀಘ್ರವಾಗಿ ದಹಿಸುವುದರಿಂದ ಬೇಗನೇ ಬೆಂಕಿ ಹೊತ್ತಿಕೊಳ್ಳುತ್ತದೆ. ಅರಣ್ಯಗಳಲ್ಲಿ ಕಿಡಿ ಹಾರಿದಾಗ ಅದು ಫ್ಯೂಸಿನಂತೆ ವರ್ತಿಸಿ, ಅರಣ್ಯನಾಶಕ್ಕೆ ಕಾರಣವಾಗುತ್ತದೆ. ಕೆಲವು ಕಲ್ಲುಹೂಗಳಲ್ಲಿ ಟ್ಯಾನಿನ್ ಎಂಬ ವಸ್ತುವಿದೆ. ಅದನ್ನು ಫ್ರಾನ್ಸ್‌ ಮತ್ತಿತರ ದೇಶಗಳಲ್ಲಿ ಪ್ರಾಣಿಗಳ ತೊಗಲನ್ನು ಹದಗೊಳಿಸಲು ಬಳಸುತ್ತಾರೆ.

ಸಿಟ್ರೇರಿಯ ಐಸ್ಲಾಂಡಿಕ ಮತ್ತು ಲೊಬೇರಿಯ ಪಲ್ಮನೇರಿಯ ಎಂಬ ಕಲ್ಲುಹೂಗಳಲ್ಲಿರುವ ಒಂದು ಬಗೆಯ ಕಹಿವಸ್ತುವನ್ನು (ಅಸ್ಟ್ರಿಂಜೆಂಟ್) ಚರ್ಮ ಹದಗೊಳಿಸುವುದಕ್ಕೆ ಬಳಸಲಾಗುತ್ತದೆ. ಕ್ಲಾಡೋನಿಯ ರಾಂಜಿಫೆರ, ಉಸ್ನಿಯ, ರಮಾಲಿನ ಫ್ರಾಕ್ಸಿನಿಯ ಇತ್ಯಾದಿಗಳನ್ನು ಆಲ್ಕೊಹಾಲ್ ತಯಾರಿಕೆಯಲ್ಲಿ ಬಳಸುವರು.

ಹಾನಿಕಾರಕ ಕಲ್ಲು ಹೂಗಳು=
 ೧ ಕಲ್ಲು ಹೂಗಳು ಅನೇಕ ವೇಳೆ ಹಳೆಯ ಮನೆಗಳ ಕಿಟಕಿ ಬಾಗಿಲುಗಳ ಗಾಜಿಗೆ ಅಂಟಿಕೊಂಡು ಬೆಳೆಯುತ್ತವೆ. ಅಲ್ಲಿ ಅವು ಕೆಲವು ಆಮ್ಲಗಳನ್ನು ಸ್ರವಿಸಿ ಗಾಜು ಕಚ್ಚುಕಚ್ಚಾಗುವಂತೆ ಮಾಡಿ ವಿಕಾರಗೊಳಿಸುತ್ತವೆ, ಇಲ್ಲವೆ ದುರ್ಬಲಗೊಳಿಸುತ್ತವೆ. 
 ೨ ಕ್ಲಾಡೋನಿಯ ಮತ್ತು ಆಂಫಿಲೋಮ ಎಂಬ ಕೆಲವು ಜಾತಿಯ ಕಲ್ಲು ಹೂಗಳು ಶೈವಲಗಳೆಂಬ ಸಸ್ಯಗಳ ಮಡಿಗಳಲ್ಲಿ  ನೇರವಾಗಿ ಪರತಂತ್ರ ಜೀವಿಗಳಾಗಿ ದಾಳಿ ಮಾಡಿ, ಅವುಗಳ ಸಾಮೂಹಿಕ ನಾಶಕ್ಕೆ ಕಾರಣವಾಗುತ್ತವೆ.	(ಪಿ.ಎಸ್.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ